ಪುನರೀಕ್ಷಣವಾದ - 
	ಕಾರ್ಲ್ ಮಾಕ್ರ್ಸ್‍ನ ಕೆಲವು ಸಿದ್ಧಾಂತಗಳನ್ನು ಪುನರ್ವಿಮರ್ಶಿಸಲು ಯತ್ನಿಸಿದ ಎಡ್ವರ್ಡ್ ಬರ್ನ್‍ಸ್ಟೈನನ ತರ್ಕಗಳಿಗೆ ಪ್ರಾರಂಭದಲ್ಲಿ ಪುನರೀಕ್ಷಣವಾದ (ರಿವಿಷನಿಸಮ್) ಎನ್ನಲಾಗುತ್ತಿತ್ತು. ಮೌಲ್ಯದ ಶ್ರಮ ಸಿದ್ಧಾಂತ. ಆರ್ಥಿಕ ನಿಯತಿವಾದ ಮತ್ತು ವರ್ಗ ಹೋರಾಟದ ಪ್ರಾಮುಖ್ಯ ಇವನ್ನು ಬರ್ನ್‍ಸ್ಟೈನ್ ಅಲ್ಲಗಳೆದಿದ್ದ. ಜರ್ಮನ್ ಸಮಾಜ ಆಗಲೇ ಮಾಕ್ರ್ಸ್‍ನ ಕೆಲವು ಭವಿಷ್ಯ ನುಡಿಗಳನ್ನು ಸುಳ್ಳೆಂದು ತೋರಿಸಿಕೊಟ್ಟಿದೆ ; ಬಂಡವಾಳಪದ್ಧತಿ ಕುಸಿದುಹೋಗುವ ಸ್ಥಿತಿಯನ್ನು ಮುಟ್ಟಿಲ್ಲ ; ದಿನಗಳಂತೆ ಬಂಡವಾಳ ಕಡಿಮೆ ಕಡಿಮೆ ಜನರಲ್ಲಿ ಸಾಂದ್ರೀಕರಿಸುತ್ತಿದೆಯೆಂಬುದರಲ್ಲಿ ತಥ್ಯವಿಲ್ಲ ; ಸಮಾಜದಿಂದ ಮಧ್ಯಮವರ್ಗ ಮಾಯವಾಗುತ್ತಿಲ್ಲ ; ಕಾರ್ಮಿಕವರ್ಗ ಹೆಚ್ಚು ಹೆಚ್ಚು ದುರವಸ್ಥೆಗಳಿಗೆ ಈಡಾಗುತ್ತಿಲ್ಲ ಎಂದು ಮುಂತಾಗಿ ಬರ್ನ್‍ಸ್ಟೈನ್ ವಾದಿಸಿದ. ಅವನ ಪುನರೀಕ್ಷಣವಾದ ಸಮಕಾಲೀನ ಸಮಾಜವಾದಿ ಪ್ರಜಾಪ್ರಭುತ್ವವಾದಿಗಳಲ್ಲಿ ಗಮನಾರ್ಹವಾದ ವಿವಾದಕ್ಕೆ ಎಡೆಕೊಟ್ಟಿತು. ಕಾರ್ಲ್ ಕೌಟ್ಸ್ಕಿಯ ನೇತೃತ್ವದಲ್ಲಿ ಅವರು ಬರ್ನ್‍ಸ್ಟೈನ್‍ವಾದವನ್ನು ಖಂಡಿಸಿದರು. ಆದರೂ ಅದು ಪಕ್ಷದ ಪ್ರಾಯೋಗಿಕ ನೀತಿಗಳ ಮೇಲೆ ಬಲವಾದ ಆಘಾತವನ್ನುಂಟುಮಾಡದೇ ಇರಲಿಲ್ಲ.

	ಬರ್ನ್‍ಸ್ಟೈನ್ ವಾದ ಶ್ರಮಜೀವಿಗಳನ್ನು ಭಾವನಾತ್ಮಕವಾಗಿ ನಿರುಪಾಯರಾಗಿ ಮಾಡುವ ಒಂದು ಯತ್ನ. ಅವನು ತಾರ್ಕಿಕ ದ್ರವ್ಯ ವಾಸ್ತವತಾವಾದವನ್ನು ನವಕ್ಯಾಂಟಿಯನ್ ಆದರ್ಶವಾದದಿಂದಲೂ ಮಾಕ್ರ್ಸ್‍ನ ಬೋಧನೆಗಳನ್ನು ಬಂಡವಾಳ ಪದ್ಧತಿಯ ಹೀನ ಸಮರ್ಥನೆ ಮತ್ತು ಉದಾರ ಅರ್ಥಶಾಸ್ತ್ರಜ್ಞರಿಂದ ಎರವಲು ಪಡೆದುಕೊಂಡ ವಿಚಾರಗಳಿಂದಲೂ ಕ್ರಾಂತಿಕಾರಿ ಸಮಾಜವಾದವನ್ನು ಬಂಡವಾಳ ಪದ್ಧತಿ ಕ್ರಮೇಣ ಸಮಾಜವಾದಿ ಸಮಾಜವಾಗಿ ಬೆಳೆಯುತ್ತದೆಯೆನ್ನುವ ವಾದದಿಂದಲೂ ಸ್ಥಾನಪಲ್ಲಟ ಮಾಡಲು ಹವಣಿಸಿದ-ಎನ್ನುವ ದೂರುಗಳಿವೆ. ಸಣ್ಣಪುಟ್ಟ ಸುಧಾರಣೆಗಳನ್ನು ಕಾರ್ಯಗತ ಮಾಡುವುದು ಕಾರ್ಮಿಕ ಚಳವಳಿಯ ಮುಖ್ಯ ಕಾರ್ಯವೆಂದೂ ಸಂಸದೀಯ ಚಟುವಟಿಕೆಯೇ ಹೋರಾಟದ ಮೂಲಸಾಧನವೆಂಬುದೂ ಬರ್ನ್‍ಸ್ಟೈನ್‍ವಾದವೆಂದು ಟೀಕಿಸಲಾಗಿದೆ.

	ಮಾಕ್ರ್ಸ್‍ನ ನಿಜವಾದ ಸಿದ್ಧಾಂತಗಳನ್ನು ಬಿಟ್ಟುಕೊಡುವುದು, ಇಲ್ಲವೇ ಅವುಗಳಿಂದ ದೂರ ಸರಿಯುವುದು ಎನ್ನುವುದನ್ನು ಸೂಚಿಸುವುದಕ್ಕೆ ಈಗ ಈ ಪದವನ್ನು ಬಳಸಲಾಗುತ್ತಿದೆ. ಸಿದ್ಧಪಟ್ಟ ವಿಚಾರಗಳಿಂದ ದಿಕ್ಚ್ಯುತಿಯ ಕೆಲವೊಂದು ನಮೂನೆಗಳನ್ನು ಸೂಚಿಸುವುದಕ್ಕೂ ಈ ಪದವನ್ನು ಈಚೆಗೆ ಬಳಸಲಾಗುತ್ತಿದೆ. ಉದಾಹರಣೆಗಾಗಿ ಯುಗೋಸ್ಲಾವ್ ಕಮ್ಯೂನಿಸ್ಟರ ವಿಚಾರ ಮತ್ತು ನೀತಿಗಳನ್ನು ಸೋವಿಯತ್ ವಿಮರ್ಶಕರು ಆಧುನಿಕ ಪುನರೀಕ್ಷಣವಾದವೆಂದು ಕರೆಯುತ್ತಿದ್ದರೆ, ಚೀನಿ ಕಮ್ಯೂನಿಸ್ಟರು ಸೋವಿಯತ್ ನಾಯಕತ್ವವನ್ನು ಖಂಡಿಸುವುದಕ್ಕೂ ಇದೇ ಪದವನ್ನು ಬಳಸುತ್ತಾರೆ.						(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ